ಏರುತ್ತಿರುವ ಕರೆಂಟ್ ಬಿಲ್ ಕಡಿಮೆ ಮಾಡುವದು ಹೇಗೆ?

ಕಾಲ ಕಳೆದಂತೆ ನಮ್ಮ ಮನೆಯಲ್ಲಿ ಆಫೀಸಲ್ಲಿ ಇಲೆಕ್ಟ್ರಿಸಿಟಿ ಅಂದ್ರೆ ಕರೆಂಟ್ ಅವಶ್ಯಕತೆ ಜಾಸ್ತಿ ಆಗ್ತಾನೆ ಇದೆ ಅಲ್ವಾ? ಅದೇ ರೀತಿ ಅದರ ಬೆಲೆ ಕೂಡಾ ಹೆಚ್ತಾ ಇದೆ. 

ಹಳೆಯ ಕಾಲದಲ್ಲಿ ಹೆಚ್ಚೆಂದರೆ ಒಂದೆರಡು ಬಲ್ಬ್ ಮನೆಯಲ್ಲಿ ಇರುತ್ತಿದ್ದವು. 

ಕ್ರಮೇಣ ಬಾವಿಯಲ್ಲಿ ನೀರು ಸೇದುತ್ತಿದ್ದ ಕೆಲಸ ನೀರಿನ ಪಂಪ್ ಮಾಡಲಾರಂಭಿಸಿತು. 

ಒರಳು ಕಲ್ಲು ಹೋಗಿ ಮಿಕ್ಸರ್ ಗ್ರೈಂಡರ್, ಚಿಕ್ಕ ರೇಡಿಯೋ ಹೋಗಿ ದೊಡ್ಡ ಟಿವಿ, ಫ್ರಿಜ್, ವಾಶಿಂಗ್ ಮಶೀನ್, ಡಿಶ್ ವಾಶರ್, ಗೀಸರ್ ಹೀಗೆ ಹಲವು ವಿದ್ಯುತ್ ಬೇಡುವ ಯಂತ್ರಗಳು ಮನೆ ತುಂಬಿಕೊಂಡವು. ಇನ್ನು ಸೆಕೆಗಾಲದಲ್ಲಿ ಫ್ಯಾನ್ / ಏಸಿ ಬೇಕೆ ಬೇಕು. 

ಇನ್ನು ಮೊಬೈಲ್, ಲ್ಯಾಪ್ ಟಾಪ್, ಟ್ಯಾಬ್ಲೆಟ್, ಸ್ಮಾರ್ಟ್ ವಾಚ್, ಹೊಗೆ ಚಿಮಣಿ, ಮೈಕ್ರೋ ಓವನ್ ಹೀಗೆ ವಿದ್ಯುತ್ ಬಳಸುವ ಮಶೀನ್ ಒಂದೇ ಎರಡೇ.

ಅದಕ್ಕೆ ತಕ್ಕ ಹಾಗೆ ಕರೆಂಟ್ ಜಾಸ್ತಿ ಬಳಕೆ ಮನೆಗಳಲ್ಲಿ ಆಗುತ್ತಾ ಹೋಯ್ತು. ಇತ್ತೀಚೆಗೆ ಇಲೆಕ್ಟ್ರಿಕ್ ಸ್ಕೂಟರ್ / ಕಾರು ಕೆಲವು ಮನೆಗಳಲ್ಲಿ ಬಂದಿವೆ. ಒಟ್ಟಿನಲ್ಲಿ ಮನೆಯಲ್ಲಿ ಬಳಕೆ ಆಗುವ ವಿದ್ಯುತ್ ಹೆಚ್ಚುತ್ತಾನೇ ಇದೆ. ಕರೆಂಟ್ ಬಿಲ್ ತಕ್ಕ ಹಾಗೆ ಏರುತ್ತಾ ಇದೆ.

ಆಗಿರೋ ಗಾಯಕ್ಕೆ ಬರೆ ಹಾಕೋ ಹಾಗೆ ಇತ್ತೀಚೆಗೆ ಕರೆಂಟ್ ಚಾರ್ಜ್ ಒಂದು ಯುನಿಟ್ ಗೆ ಹಾಗೂ ನಿಗದಿತ ಶುಲ್ಕ ಕೂಡಾ ಜಾಸ್ತಿ ಆಗಿದೆ. 

ವಿಸ್ಮಯಪುರಿಯ ಓದುಗ ಮಹಾಶಯರೇ ನೀವು ಕಿಂಚಿತ್ ಹೆದರಬೇಡಿ! ಯಾವುದೇ ಸಮಸ್ಯೆಗೆ ಕೊರಗುತ್ತಾ ಕೂರುವದಕ್ಕಿಂತ ಪರಿಹಾರ ಕಂಡುಕೊಳ್ಳುವದೇ ಜಾಣತನ! ಕರೆಂಟ್ ಬಿಲ್ ಉಳಿಸಲು ಇರುವ ಹಲವು ರಹಸ್ಯ ಯುಕ್ತಿಗಳನ್ನು ಈ ಲೇಖನ ನಿಮ್ಮ ಮುಂದೆ ಇಡಲಿದೆ.

ಈ ಲೇಖನ ಪೂರ್ತಿ ಓದಿ. ಇಲ್ಲಿರುವ ಟಿಪ್ಸ್ ಅಲ್ಲಿ ನಿಮ್ಮ ಮನೆಯಲ್ಲಿ ಯಾವುದನ್ನು ಬಳಸಬಹುದು ಎಂದು ಒಮ್ಮೆ ಚಿಂತನೆ ಮಾಡಿ. ಕೆಲವೇ ಕೆಲವು ಟಿಪ್ಸ್ ಅನುಸರಿಸಿದರೂ ಕರೆಂಟ್ ಬಿಲ್ ಕಡಿಮೆ ಆಗುವದು ಖಚಿತ.

ಇದರಿಂದ ವಿದ್ಯುತ್ ಎನರ್ಜಿ ಉಳಿತಾಯ ಆಗುತ್ತೆ ಜೊತೆಗೆ ಕರೆಂಟ್ ಬಿಲ್ ಕೂಡಾ ಕಡಿಮೆ ಆಗುತ್ತೆ. ಪರಿಸರ ಸಂರಕ್ಷಣೆಗೂ ಅನುಕೂಲ.

ನಮಗೆ ಕರೆಂಟ್ ಬಿಲ್ ಫ್ರೀ ಕಣಪ್ಪಾ ಅಂತಾ ಮುಸಿ ಮುಸಿ ನಗ್ತಾ ಇದೀರಾ. ೨೦೦ ಯುನಿಟ್ ದಾಟಿದ್ರೆ ನೀವು ಕೂಡಾ ಬಿಲ್ ಕಟ್ಟಬೇಕು. ಅದಕ್ಕಾದ್ರೂ ನೀವು ಕರೆಂಟ್ ಬಿಲ್ ಯಾವುದೇ ಕಾರಣಕ್ಕೆ ಜಾಸ್ತಿ ಆಗದಂತೆ ನೋಡಿಕೊಳ್ಳ ಬೇಕು. ಅಲ್ವಾ? ಈ ಲೇಖನ ನೀವೂ ಕೂಡಾ ಪೂರ್ತಿ ಓದಿ. ಅದಕ್ಕೆ ದುಡ್ಡು ಕೊಡಬೇಕಿಲ್ಲ! ಇದು ಎಲ್ಲರಿಗೂ ಫ್ರೀ!!

ಬನ್ನಿ ಏರುತ್ತಿರುವ ಮನೆಯ ಕರೆಂಟ್ ಬಿಲ್ ಕಡಿಮೆ ಮಾಡುವದು ಹೇಗೆ ಎನ್ನುವದನ್ನು ತಿಳಿಯೋಣ. ಇಲ್ಲಿನ ಹೆಚ್ಚಿನ ಟಿಪ್ಸ್ ಅಂಗಡಿ, ಕಚೇರಿ ಹೀಗೆ ಎಲ್ಲ ಕಡೆ ಕೂಡಾ ಉಪಯುಕ್ತ.

ಯಾಕೆ ಕರೆಂಟ್ ದುಬಾರಿ ಆಗ್ತಾ ಇದೆ?

ಉಳಿತಾಯದ ರಹಸ್ಯ ಸೂತ್ರ ತಿಳಿಯುವ ಮುನ್ನ ಕರೆಂಟ್ ಯಾಕೆ ದುಬಾರಿ ಆಗ್ತಾ ಇದೆ? ಅರಿಯೋಣ. ಕಾಲಕಳೆದಂತೆ ವಸ್ತುಗಳ ಬೆಲೆ ಏರುವದು ಇಕಾನಾಮಿಕ್ಸ್ ನಿಯಮ. ಕರೆಂಟ್ ಚಾರ್ಜ್ ಏರಲು ಹಲವು ಕಾರಣಗಳಿವೆ.

ಕಾರಣ ೧: ಮೂಲ ಸೌಕರ್ಯಗಳ ಖರ್ಚು

ವಿದ್ಯುತ್ ನಿಸರ್ಗದಲ್ಲಿ ಉಚಿತವಾಗಿ ಸಿಗದು. ಇದಕ್ಕೆ ವಿದ್ಯುತ್ ಉತ್ಪಾದಿಸುವ ಪವರ್ ಪ್ಲಾಂಟ್ ಗಳು ಬೇಕು. ವಿದ್ಯುತ್ ಸಾಗಿಸಲು ಟ್ರಾನ್ಸ್ಮಿಶನ್ ಲೈನ್ ಹಾಗೂ ಹಂಚಿಕೆ ಮಾಡುವ ಪವರ್ ಗ್ರಿಡ್ ಗಳು ಬೇಕು. 

ಇಂದು ವಿದ್ಯುತ್ ಬೇಡಿಕೆ ಹೆಚ್ಚುತ್ತಿರುವದರಿಂದ ಹೊಸ ಪವರ್ ಪ್ಲಾಂಟ್ ನಿರ್ಮಾಣ ಮಾಡಬೇಕು. ಹಳೆಯ ಪವರ್ ಗ್ರಿಡ್ ಅನ್ನು ಅಪ್ ಗ್ರೇಡ್ ಮಾಡಬೇಕು. ಈ ಎಲ್ಲ ಮೂಲ ಸೌಕರ್ಯ ನಿರ್ವಹಣೆಗೆ ಅಗಾಧ ವೆಚ್ಚ ಆಗುತ್ತದೆ. 

ಕೆಲವು ಪವರ್ ಪ್ಲಾಂಟ್ ಗೆ ಕಲ್ಲಿದ್ದಲು ಇಂಧನ ಬೇಕು. ಅದರ ಬೆಲೆ ಕೂಡಾ ಏರುತ್ತಿದೆ.

ಕಾರಣ ೨: ಪೂರೈಕೆ ಹಾಗೂ ಬೇಡಿಕೆಯ ವ್ಯತ್ಯಾಸ

ಮನೆಗಳಿಂದ, ಕಾರ್ಖಾನೆಗಳಿಂದ ಕರೆಂಟ್ ಬೇಡಿಕೆ ರಾಕೆಟ್ ವೇಗದಲ್ಲಿ ಏರುತ್ತಿದ್ದರೆ ಕಂಪನಿಗಳು ವಿದ್ಯುತ್ ಸಪ್ಲೈ ಆ ವೇಗದಲ್ಲಿ ಹೆಚ್ಚಿಸಲು ಒದ್ದಾಡುತ್ತಿದೆ. ಇದೂ ಕೂಡಾ ಬೆಲೆ ಏರಿಕೆಗೆ ಒಂದು ಕಾರಣ.

ಕಾರಣ ೩: ಪುನರ್ಬಳಕೆಯ ವಿದ್ಯುತ್ ಕೊರತೆ

ಸೋಲಾರ್ ಹಾಗೂ ಗಾಳಿಯ ವಿದ್ಯುತ್ ಉತ್ಪಾದನೆಯಲ್ಲಿ ಹಲವು ಸುಧಾರಣೆ ಆಗಿದೆ. ಆದರೆ ಇವುಗಳಲ್ಲಿ ವಿದ್ಯುತ್ ಉತ್ಪಾದನೆ ಬಿಸಿಲು, ಗಾಳಿ ಹೀಗೆ ಹಲವು ಅಂಶಗಳ ಆಧಾರದ ಮೇಲೆ ಹೆಚ್ಚು ಕಡಿಮೆ  ಆಗ್ತಾ ಇರುತ್ತೆ. ಯಾವಾಗಲೂ ಇರುವ ವಿದ್ಯುತ್ ಬೇಡಿಕೆಯನ್ನು ಆಗಾಗ ಬದಲಾಗುತ್ತಿರುವ ಪುನರ್ಬಳಕೆ ವಿದ್ಯುತ್ ಬಳಸಿ ಪೂರೈಸುವದು ಕೂಡಾ ಒಂದು ಸಮಸ್ಯೆ.

ಕಾರಣ ೪: ರೆಗ್ಯುಲೇಟರ್ ಸ್ಟಾಂಡರ್ಡ್ ಗಳು


ಪರಿಸರದಲ್ಲಿ ಹೊಗೆ ಉಗುಳುವಿಕೆಯ ನಿಯಂತ್ರಣ, ಪವರ್ ಗ್ರಿಡ್ ಗುಣಮಟ್ಟದ ಖಾತರಿ ಇತ್ಯಾದಿ ಕೂಡಾ ಕೆಲವೊಮ್ಮೆ ವಿದ್ಯುತ್ ಖರ್ಚು ಹೆಚ್ಚಲು ಕಾರಣ. ಯಾಕೆಂದರೆ ಈ ನಿಯಮ ಅನುಸರಿಸಲು ಕಾಲ ಕಾಲಕ್ಕೆ ಆಧುನಿಕ ಯಂತ್ರಗಳ ಖರೀದಿ ಮಾಡಿ ಪವರ್ ಪ್ಲ್ಯಾಂಟ್ ಹಾಗೂ ಗ್ರಿಡ್ ಗಳ ಅಪ್ ಗ್ರೇಡ್ ಮಾಡಬೇಕು.

ಕಾರಣ ೫: ಇನ್ನುಳಿದ ಫೀ ಹಾಗೂ ಚಾರ್ಜ್ ಗಳು

ವಿದ್ಯುತ್ ಹಂಚಿಕೆಯ ಚಾರ್ಜ್ ಗಳು, ಹೆಚ್ಚಿನ ಕೆಪಾಸಿಟಿ ಫೀ ಗಳು, ಸರಕಾರದ ಟ್ಯಾಕ್ಸ್ ಗಳು ಇನ್ನೂ ಹಲವು ಖರ್ಚುಗಳು ಉಳಿದ ಗ್ರಾಹಕರೇ ಹೊರಬೇಕು. ಇದಕ್ಕೆ ಪರ್ಯಾಯ ಇಲ್ಲ.

ಕಾರಣ ೬: ವಿದ್ಯುತ್ ಸೋರಿಕೆ

ವಿದ್ಯುತ್ ಸಾಗಿಸುವಾಗ ಸ್ವಲ್ಪ ಪ್ರಮಾಣ ವೇಸ್ಟ್ ಆಗುತ್ತದೆ. ಅಷ್ಟೇ ಅಲ್ಲ ಕೆಲವರು ಅನಧಿಕೃತವಾಗಿ ಕದ್ದು ಬಳಸುವದು ಸಹ ಇದೆ. ಇದೂ ಕೂಡಾ ಬೆಲೆ ಏರಿಕೆಗೆ ಕೊಡುಗೆ ನೀಡುತ್ತದೆ.

ವಿದ್ಯುತ್ ಉಳಿತಾಯಕ್ಕೆ ಸೂತ್ರಗಳು

ಬೇಡಿಕೆ ಹಾಗೂ ಹಣದುಬ್ಬರಕ್ಕೆ ತಕ್ಕ ಹಾಗೆ ಕರೆಂಟ್ ಬೆಲೆ ಏರಿದೆ ನಿಜ. ಹಾಗಂತ ಕೈ ಕಟ್ಟಿ ಕುಳಿತರೆ ಪ್ರಯೋಜನ ಇಲ್ಲ. ಎಲ್ಲಿ ಎಲ್ಲಿ ಅನವಶ್ಯಕವಾಗಿ ಜಾಸ್ತಿ ಕರೆಂಟ್ ಬಳಸ್ತಾ ಇದೀರಾ? ಚೆಕ್ ಮಾಡಿ. ಅವನ್ನು ನಿಲ್ಲಿಸಿ.

ಬೆಳಕಿನಲ್ಲಿ ಬದಲಾವಣೆ

೧. ನಿಮ್ಮ ಮನೆಯಲ್ಲಿ ಎಲ್ ಇ ಡಿ ಬಲ್ಬ್ ಹಾಗೂ ಟ್ಯೂಬ್ ಲೈಟ್ ಬಳಸಿ.

ಅದೊಂದು ಕಾಲವಿತ್ತು. ನಮ್ಮ ಮನೆಗಳು ತಂತಿ ಬಲ್ಬ್ ಗಳು ಹಾಗೂ ಟ್ಯೂಬ್ ಲೈಟ್ ನಿಂದ ಬೆಳಗುತ್ತಿದ್ದವು. ಆದರೆ ಅವು ವಿದ್ಯುತ್ ಶಕ್ತಿ ಹೀರಿ ಬೆಳಕು ನೀಡುತ್ತಿದ್ದವು. ತಂತಿ ಬಲ್ಬ್ ಗಳಂತೂ ಸ್ವಲ್ಪ ಹೊತ್ತಿನ ನಂತರ ಬಿಸಿ ಬಿಸಿ ಆಗಿರುತ್ತಿದ್ದವು. ಅಂದರೆ ವಿದ್ಯುತ್ ಶಕ್ತಿ ಉಷ್ಣ ಶಕ್ತಿ ಆಗಿ ವೇಸ್ಟ್ ಆಗುತಿತ್ತು. 

ನಮ್ಮ ಹಣ ಕೂಡಾ ಹಾಳಾಗುತ್ತಿತ್ತು ಅಷ್ಟೇ ಅಲ್ಲ ಪರಿಸರಕ್ಕೂ ಹಾನಿಕರ.

ಆಗ ಬಂದಿದ್ದು ಸಿಎಫ್ ಎಲ್ ಹಾಗೂ ಎಲ್ ಇಡಿ ಬಲ್ಬ್ ಗಳು. ಇವೆರಡೂ ಬೆಳಕಿನ ಲೋಕದ ಸೂಪರ್ ಸ್ಟಾರ್ ಗಳು! ಕಡಿಮೆ ವಿದ್ಯುತ್ ಬಳಕೆ ಮಾಡುತ್ತೆ ಅಷ್ಟೇ ಅಲ್ಲ ಬೆಳಕು ಜಾಸ್ತಿ ಹಾಗೂ ಹೆಚ್ಚು ಕಾಲ ಬಾಳಿಕೆ ಕೂಡಾ ಬರುತ್ತವೆ. ಒಂದು ರೀತಿಯಲ್ಲಿ ಬೆಳಕಿನ ಲೋಕದಲ್ಲಿ ಕ್ರಾಂತಿ ಆಯ್ತು ಎಂದರೆ ತಪ್ಪಲ್ಲ.

ನಿಮ್ಮ ಮನೆ / ಅಂಗಡಿ ಸುತ್ತ ನೋಡಿ ತಂತಿ ಬಲ್ಬ್ ಅಥವಾ ಹಳೆಯ ಟ್ಯೂಬ್ ಲೈಟ್ ಇದ್ದರೆ ತೆಗೆದು ಮೊದಲು ಕಸದ ಬುಟ್ಟಿಗೆ ಹಾಕಿ! ಉತ್ತಮ ಬ್ರ್ಯಾಂಡಿನ ಎಲ್ ಇ ಡಿ ಬಲ್ಬ್ ಖರೀದಿಸಿ ಬಳಸಿ.

ಸಾಮಾನ್ಯವಾಗಿ ಚಿಕ್ಕ ರೂಮಿಗೆ ೭ ಅಥವಾ ೯ ವ್ಯಾಟಿನ ಬಲ್ಬ್ ಸಾಕು. ರಾತ್ರಿಯಿಡಿ ಬಳಸುವ ಕಡೆ ೩ ಅಥವಾ ಐದು ವ್ಯಾಟಿನ ಬಲ್ಬ್ ಕೂಡಾ ಸಾಕು. ಹಾಲ್ ದೊಡ್ಡದಿದ್ದರೆ ೩೬ ವ್ಯಾಟಿನ ಟ್ಯೂಬ್ ಲೈಟ್, ಚಿಕ್ಕ ಹಾಲಿಗೆ ೧೮ ವ್ಯಾಟಿಂದೂ ಸಾಕು. ಒಂದೆರಡು ಬಲ್ಬ್ ಖರೀದಿಸಿ ಬಳಸಿ ನೋಡಿ ಆಮೇಲೆ ನಿರ್ಧರಿಸಿ.

ಓದಲು ಟೇಬಲ್ ಲ್ಯಾಂಪ್ ಬಳಸಿ ಅಥವಾ ಬಲ್ಬ್ ಇರುವ ಜಾಗದ ಕೆಳಗೆ ಟೇಬಲ್ ಇಡಿ.

೨. ಹಗಲಲ್ಲಿ ಕರ್ಟನ್ ಹಾಗೂ ಕಿಟಕಿ ತೆರೆದು ನೈಸರ್ಗಿಕ ಬೆಳಕು ಬಳಸಿ

ನಿಮ್ಮ ಮನೆಯಲ್ಲಿ ಸೂರ್ಯನ ಬೆಳಕು ಸಾಕಷ್ಟು ಬಂದು ಹಗಲಿನಲ್ಲಿ ವಿದ್ಯುತ್ ದೀಪ ಬಳಕೆ ಕಡಿಮೆ ಮಾಡಿ.

೩. ಟಾಸ್ಕ್ ಲೈಟ್ ಅನ್ನು ಬಳಸಿ


ಇಡೀ ರೂಂ ಅನ್ನು ಬೆಳಗುವದರ ಬದಲು ಟಾಸ್ಕ್ ಲೈಟ್ ಬಳಸಿ. ಅಂದ್ರೆ ಎಲ್ಲಿಓದುವ ಬರೆಯುವ ಜಾಗ, ಹೊಲಿಗೆ ಮಾಡುವ ಜಾಗ, ಅಡುಗೆ ಮಾಡುವ ಜಾಗ ಅಂತಾ ಚಿಕ್ಕ ಕಡೆ ಮಾತ್ರ ಜಾಸ್ತಿ ಬೆಳಕು ಇರುವ ಹಾಗೆ ಲೈಟ್ ಅನ್ನು ಹೊಂದಿಸುವದು. ಉಳಿದ ಕಡೆ ಸಾಧಾರಣ ಬೆಳಕು ಸಾಕು.

೪. ರೂಂ ಹೊರ ಹೋಗುವ ಮುನ್ನ ಲೈಟ್ ಆಫ್ ಮಾಡಿ

ಕೋಣೆ ಹೊರ ಹೋಗುವ ಮುನ್ನ ಲೈಟ್ ಆಫ್ ಮಾಡುವದನ್ನು ರೂಡಿ ಮಾಡಿ ಕೊಂಡರೆ ಕೂಡಾ ಉತ್ತಮ. ರಾತ್ರಿ ಮಲಗುವ ಮುನ್ನ ಎಲ್ಲ ಅನವಶ್ಯಕ ಲೈಟ್ ಗಳನ್ನು ಆರಿಸಿ.

೫. ಚಲನೆ ಆಧಾರಿತ ಲೈಟ್ ಬಳಸಿ

ಓಡಾಡುವ ಜಾಗದಲ್ಲಿ ಜನ ಓಡಾಡಿದಾಗ ಮಾತ್ರ ಉರಿಯುವ ಸ್ಮಾರ್ಟ್ ದೀಪ ಬಳಸಬಹುದು. ಇದಕ್ಕೆ ಚಲನೆಯನ್ನು ಪತ್ತೆ ಮಾಡುವ ಸೆನ್ಸರ್ ಅಗತ್ಯ ಇದೆ. ಈ ಮೂಲಕ ನಿರಾಯಾಸವಾಗಿ ಬೇಕಾದಾಗ ಮಾತ್ರ ದೀಪಗಳು ಉರಿದು ಆಮೇಲೆ ತಂತಾನೇ ಆಫ್ ಆಗುತ್ತವೆ.

೬. ಸ್ಮಾರ್ಟ್ ಲೈಟ್ ಬಳಸಿ

ನಿಮ್ಮ ಮೊಬೈಲ್ ನಿಂದ ಕಂಟ್ರೋಲ್ ಮಾಡಬಲ್ಲ ಸ್ಮಾರ್ಟ್ ಲೈಟ್ ಕೂಡಾ ಲಭ್ಯವಿದೆ. ನೀವು ಮೊಬೈಲ್ ಆಪ್ ಬಳಸಿ ಆನ್ / ಆಫ್ ಮಾಡಬಹುದು. ಎಷ್ಟು ಗಂಟೆ ಉರಿಯಬೇಕು ಎಂದು ಶೆಡ್ಯೂಲ್ ಕೂಡಾ ಮಾಡ ಬಹುದು. ಆ ಸಮಯದ ನಂತರ ತಂತಾನೆ ಲೈಟ್ ಆಫ್ ಆಗುತ್ತೆ.

ಯಂತ್ರ ಸಾಧನಗಳ ಸಮರ್ಥ ಬಳಕೆ

೧. ಕಡಿಮೆ ವಿದ್ಯುತ್ ಶಕ್ತಿ ಬಳಸುವ ಯಂತ್ರ ಬಳಸಿ


ಫ್ರಿಜ್, ವಾಶಿಂಗ್ ಮಶೀನ್ ಖರೀದಿ ಮಾಡುವಾಗ ಅವುಗಳ ಎನರ್ಜಿ ರೇಟಿಂಗ್ ಅನ್ನೂ ಸಹ ನೋಡಿ. ಉತ್ತಮ ಎನರ್ಜಿ ರೇಟಿಂಗ್ ಇದ್ದರೆ ಒಳಿತು. 

ಎಷ್ಟು ಅಗತ್ಯವೋ ಅಷ್ಟೇ ಕೆಪಾಸಿಟಿಯ ಯಂತ್ರ ಖರೀದಿಸಿ. ಅನಗತ್ಯವಾಗಿ ಹೆಚ್ಚಿನ ಸಾಮರ್ಥ್ಯದ ಯಂತ್ರ ಖರೀದಿಸಬೇಡಿ. ಅವು ಹೆಚ್ಚಿನ ವಿದ್ಯುತ್ ಬೇಡುತ್ತವೆ. ಉದಾಹರಣೆಗೆ ೭ಕೆಜಿ ಸಾಮರ್ಥ್ಯದ ಬಟ್ಟೆ ತೊಳೆಯುವ ಯಂತ್ರ ಸಾಕಿದ್ದರೆ ಅದನ್ನು ಖರೀದಿಸಿದರೆ ಸಾಕು. ಎಲ್ಲೋ ವರ್ಷಕ್ಕೊಮ್ಮೆ ಬೇಕು ಎಂದು ೧೫ ಕೆಜಿ ಸಾಮರ್ಥ್ಯದ ವಾಶಿಂಗ್ ಮಶೀನ್ ಖರೀದಿಸದಿರಿ. ಆ ಸಮಯದಲ್ಲಿ ಎರಡು ಬಾರಿ ಯಂತ್ರ ಬಳಸಿದರೆ ಆಯ್ತು. ಅಲ್ವಾ?

೨. ಬಳಸದಿದ್ದಾಗ ಯಂತ್ರ ಸಾಧನಗಳನ್ನು ಸ್ವಿಚ್ ಆಫ್ ಮಾಡಿ

ಬಳಸದಿದ್ದಾಗ ಯಂತ್ರ ಹಾಗೂ ಇಲೆಕ್ಟ್ರಾನಿಕ್ ಸಾಧನಗಳ ಸ್ವಿಚ್ ಆಫ್ ಮಾಡಿ. ಸ್ಟ್ಯಾಂಡ್ ಬೈ ಮೋಡ್ ಅಲ್ಲೂ ಸಹ ಅವು ವಿದ್ಯುತ್ ಬಳಸುತ್ತವೆ. ಲ್ಯಾಪ್ ಟಾಪ್ / ಮೊಬೈಲ್ / ಟ್ಯಾಬ್ಲೆಟ್ ಪೂರ್ತಿ ಚಾರ್ಚ್ ಆದ ಮೇಲೆ ಆಫ್ ಮಾಡಿ.

ಗೀಸರ್ ಕೂಡಾ ಬೇಕಿದ್ದರೆ ಆನ್ ಮಾಡಿ ಬೇಡದ ಸಮಯದಲ್ಲಿ ಆಫ್ ಮಾಡಿ. ಸುಮ್ಮನೆ ಇಡೀ ದಿನ ಆನ್ ಮಾಡಿರಬೇಡಿ. ಆಗಾಗ ಸಣ್ಣ ಪ್ರಮಾಣದಲ್ಲಿ ಬಿಸಿ ಸೀರು ಬೇಕಿದ್ದರೆ ಇನ್ಸ್ಟಂಟ್ ಗೀಸರ್  ಬಳಸಿ.

೩. ಎಸಿಯ ಥರ್ಮೋಸ್ಟಾಟ್ ಅನ್ನು ಸರಿಯಾದ ತಾಪಮಾನಕ್ಕೆ ಸೆಟ್ ಮಾಡಿ.

ಎಸಿಯ ಥರ್ಮೋಸ್ಟಾಟ್ ಅನ್ನು ಸರಿಯಾದ ತಾಪಮಾನಕ್ಕೆ ಸೆಟ್ ಮಾಡಿ. 24 ರಿಂದ 26 ಡಿಗ್ರಿ ತಾಪಮಾನ ಉತ್ತಮ. ಎಸಿ ಬೇಡದಿದ್ದರೆ ಆಫ್ ಮಾಡಿ.

೪. ರಿಫ್ರಿಜರೇಟರ್ ಅನ್ನು ನಿರ್ವಹಣೆ ಮಾಡುತ್ತಾ ಇರಿ

ಎಂದೂ ರಿಫ್ರಿಜರೇಟರ್ ಬಾಗಿಲನ್ನು ಸುಮ್ಮನೆ ತೆರೆದಿಡಬೇಡಿ. ಆಗ ಶಕ್ತಿ ವ್ಯರ್ಥ ಆಗುತ್ತೆ. ಅವುಗಳಲ್ಲಿ ಏನಾದ್ರು ಸಮಸ್ಯೆ ಇದ್ದರೆ ರಿಪೇರಿ ಮಾಡಿಸಿ.

ಸ್ಮಾರ್ಟ್ ಶಕ್ತಿ ನಿರ್ವಹಣೆ

೧. ಸ್ಮಾರ್ಟ್ ಎಸಿ ಬಳಸಿ

ಏಸಿ ತುಂಬಾ ವಿದ್ಯುತ್ ಬಳಸುತ್ತದೆ. ನಿಮ್ಮ ಎಸಿ ಸ್ಮಾರ್ಟ್ ಆಗಿದ್ದು ತಾಪಮಾನವನ್ನು ಆಟೋಮ್ಯಾಟಿಕ್ ಆಗಿ ಸೆಟ್ ಮಾಡಿ ಶಕ್ತಿ ಉಳಿತಾಯ ಮಾಡುವ ಹಾಗಿದ್ದರೆ ಉತ್ತಮ.

೨. ಸ್ಮಾರ್ಟ್ ಪ್ಲಗ್ ಬಳಸಿ

ಸ್ಮಾರ್ಟ್ ಪ್ಲಗ್ ಗಳನ್ನು ನೀವು ಮೊಬೈಲಿನಿಂದ ಕಂಟ್ರೋಲ್ ಮಾಡಬಹುದು. ನೀವು ಯಂತ್ರಗಳನ್ನು ದೂರದಿಂದಲೇ ಬೇಡದ ಸಮಯದಲ್ಲಿ ಆಫ್ ಮಾಡಬಹುದು. ಎಷ್ಟು ಗಂಟೆ ಆನ್ ಇರಬೇಕು ಎಂದು ಶೆಡ್ಯೂಲ್ ಮಾಡಬಹುದು.  ಆ ಸಮಯದ ನಂತರ ತನ್ನಿಂದ ತಾನೇ ಆಫ್ ಆಗುತ್ತೆ.

೩. ಒಂದೇ ಸ್ವಿಚ್ ಅಲ್ಲಿ ಎಲ್ಲ ಡಿವೈಸ್ ಆಫ್ ಮಾಡಲು ಪವರ್ ಸ್ಟ್ರಿಪ್ ಬಳಸಿ

ಪವರ್ ಸ್ಟ್ರಿಪ್ ಅನ್ನು ಒಂದಕ್ಕಿಂತ ಹೆಚ್ಚು ಇಲೆಕ್ಟ್ರಾನಿಕ್ ಸಾಧನಗಳನ್ನು ಒಂದು ಸ್ವಿಚ್ ಬಳಸಿ ಆಫ್ ಮಾಡ ಬಹುದು. ಇದರಿಂದ ನೀವು ಯಾವುದಾದರು ಒಂದನ್ನು ಆಫ್ ಮಾಡುವದು ಮರೆತು ಹೋಗುವದಿಲ್ಲ.

೪. ವಿದ್ಯುತ್ ಶಕ್ತಿ ಮಾನಿಟರಿಂಗ್ ಸಿಸ್ಟೆಮ್ ಬಳಸಿ

ಅಗತ್ಯ ಇದ್ದರೆ ವಿದ್ಯುತ್ ಶಕ್ತಿ ಮಾನಿಟರ್ ಮಾಡುವ ಸಿಸ್ಟೆಮ್ ಅಲ್ಲಿ ಕೂಡಾ ಬಂಡವಾಳ ಹೂಡಬಹುದು. ಚಿಕ್ಕ ಮನೆಗಳಿಗೆ ಇದರ ಅಗತ್ಯ ಇಲ್ಲ.

ಸಮರ್ಥವಾಗಿ ನೀರು ಬಿಸಿ ಮಾಡುವದು

೧. ಸೋಲಾರ್ ವಾಟರ್ ಹೀಟರ್ ಬಳಸಿ


ಸೋಲಾರ್ ನೀರು ಬಿಸಿ ಮಾಡುವ ಯಂತ್ರ ವಿದ್ಯುತ್ ಶಕ್ತಿಯ ಬಳಕೆ ಕಡಿಮೆ ಮಾಡುತ್ತದೆ. ಅನೇಕ ವಿದ್ಯುತ್ ಕಂಪನಿಗಳು ಇದಕ್ಕೆ ವಿದ್ಯುತ್ ಬಿಲ್ ಅಲ್ಲಿ ಡಿಸ್ಕೌಂಟ್ ಸಹ ನೀಡುತ್ತದೆ.

೨. ಉತ್ತಮ ಕಂಪನಿಯ ವಾಟರ್ ಹೀಟರ್ ಬಳಸಿ

ಚೆನ್ನಾಗಿ ವಿನ್ಯಾಸ ಮಾಡಿದ ಉತ್ತಮ ಬ್ರ್ಯಾಂಡ್ ನ ವಾಟರ್ ಹೀಟರ್ ಬಳಸಿ. ಕಡಿಮೆ ಗುಣಮಟ್ಟದ ವಾಟರ್ ಹೀಟರ್ ತುಂಬಾ ವಿದ್ಯುತ್ ಶಕ್ತಿ ಹೀರುತ್ತವೆ.

೩. ಮನೆಯಲ್ಲಿ ನೀರು ನಲ್ಲಿಯಲ್ಲಿ ಸೋರಿಕೆ ಇದ್ದರೆ ಸರಿಪಡಿಸಿ

ಬಚ್ಚಲು ಮನೆಯಲ್ಲಿ ನಲ್ಲಿಗಳಲ್ಲಿ ನೀರು ಸೋರುತ್ತಾ ಇದ್ದರೆ ಸರಿಪಡಿಸಿ, ಯಾಕೆಂದರೆ ನೀರು ಸೋರಿಕೆ ಆದರೆ ಮತ್ತೆ ಮತ್ತೆ ವಾಟರ್ ಪಂಪ್ ನೀರು ತುಂಬಲು ಆನ್ ಮಾಡಬೇಕು. ವಿದ್ಯುತ್ ಶಕ್ತಿ ಬೇಕು.

ಗಾಳಿ ಹಾಗೂ ತಂಪು ವ್ಯವಸ್ಥೆ

೧. ಕಿಟಕಿ ತೆರೆದು ನೈಸರ್ಗಿಕ ಗಾಳಿ ಸಾಧ್ಯವಿದ್ದಷ್ಟು ಬಳಸಿ

ಇಡೀ ದಿನ ಎಸಿ ಬಳಸುವದರ ಬದಲು ಹೊರಗಡೆ ತಂಪಾಗಿದ್ದಾಗ ಕಿಟಕಿ ತೆರೆದು ನೈಸರ್ಗಿಕ ಗಾಳಿ ಬಳಸಿ.

೨. ಏಸಿ ಬದಲು ಫ್ಯಾನ್ ಬಳಸಿ


ಎಲ್ಲ ಬಾರಿ ಏಸಿ ನೇ ಬೇಕೆಂದೇನಿಲ್ಲ. ಫ್ಯಾನ್ ಕೂಡಾ ಸಾಕು. 

೩. ಏಸಿ ಬಳಸುವಾಗ ಕಿಟಕಿ ಹಾಗೂ ಬಾಗಿಲು ಮುಚ್ಚಿರಲಿ

ಏಸಿ ಬಳಸುವಾಗ ಹೊರಗಡೆಯಿಂದ ಬಿಸಿ ಅಥವಾ ತಂಪು ಗಾಳಿ ಒಳಗಡೆ ಬರದಂತೆ ಬಾಗಿಲು ಹಾಗೂ ಕಿಟಕಿ ಮುಚ್ಚಿರಲಿ.

ಕೊನೆಯ ಮಾತು

ಕರೆಂಟ್ ಬಿಲ್ ಏರುತ್ತಿರುವ ಈ ಕಾಲದಲ್ಲಿ ವಿದ್ಯುತ್ ಶಕ್ತಿ ಉಳಿಸುವ ಮಾರ್ಗಗಳನ್ನು ನಿಮ್ಮ ಮನೆ / ಅಂಗಡಿಗಳಲ್ಲಿ ಅನುಸರಿಸಿ ನೀವು ವಿದ್ಯುತ್ ಬಿಲ್ ಕಡಿಮೆ ಮಾಡಬಹುದು.
ಈ ಮೇಲೆ ತಿಳಿಸಿದಂತಹ ಟಿಪ್ಸ್ ಅನುಸರಿಸಿ ನೀವು ವಿದ್ಯುತ್ ಶಕ್ತಿ ಬಳಕೆ ಕಡಿಮೆ ಮಾಡಬಹುದು.

ನೆನಪಿಡಿ ವಿದ್ಯುತ್ ಶಕ್ತಿ  ಉಳಿಸುವದು ಕೇವಲ ನಿಮಗೆ ಮಾತ್ರ ಲಾಭ ಅಲ್ಲ. ಅದು ಉಳಿಯಬಲ್ಲ ಭವಿಷ್ಯಕ್ಕೆ ಕೊಡುಗೆ ನೀಡುತ್ತದೆ.

ನಾವೆಲ್ಲ ಸೇರಿ ಶಕ್ತಿ ಉಳಿಸೋಣ ಹಾಗೂ ಇನ್ನೂ ಹಸಿರಾದ ಪ್ರಪಂಚ ರಚಿಸೋಣ.

ಎಂತಹ ಜಾಗದಲ್ಲಿ ನೀವು ಮನೆ / ಅಪಾರ್ಟಮೆಂಟ್ ಖರೀದಿಸಬೇಕು?

ನೀವು ಮನೆ ಕಟ್ಟಲು ಜಾಗ ಹುಡುಕುತ್ತಿದ್ದೀರಾ? ಹಾಗಿದ್ದರೆ ಸೈಟ್ ಕೊಳ್ಳುವ ಮುನ್ನ ಈ ಲೇಖನ ಪೂರ್ತಿ ಓದಿ.

ಎಲ್ಲಿ ಮನೆ ಕಟ್ಟಿದರೆ ಒಳ್ಳೆಯದು, ಎಂತಹ ಜಾಗದಲ್ಲಿ ಮನೆ ಕಟ್ಟಬಾರದು ಎಂಬುದನ್ನು ನೋಡೋಣ.

ಮನೆಯ ವಿನ್ಯಾಸ ಎಷ್ಟು ಮುಖ್ಯವೋ ಹಾಗೇ ಮನೆ ಕಟ್ಟುವ ಜಾಗ ಅಷ್ಟೇ ಮುಖ್ಯ . ಉತ್ತಮ ಗಾಳಿ ಬೆಳಕು ಬರುವ ಜಾಗದಲ್ಲಿ ಉತ್ತಮ ಹವಾಮಾನ  ಇರುವ ಪ್ರದೇಶದಲ್ಲಿ ಮನೆ ಕಟ್ಟಿದಾಗ ಆ ಅನುಭವವೇ ಬೇರೆ. ಜಾಗ ಸರಿ ಇರದಿದ್ದರೆ ಮನೆ ಎಷ್ಟು ಸುಂದರ ಇದ್ದರೂ ಉತ್ತಮ ಅನುಭವ ಸಿಗದು.

ಮನೆಗೆ ಎಂತಹ ಜಾಗ ಸೂಕ್ತ?

ಮನೆ ಕಟ್ಟುವ ಜಾಗ ಹೇಗಿರಬೇಕು? ಬನ್ನಿ ನೋಡೋಣ.

೧. ನೀರಿನ ಮೂಲಕ್ಕೆ ಹತ್ತಿರವಾಗಿರಬೇಕು

ನೀರು ಮನೆ ಕಟ್ಟಲು ಹಾಗೂ ಅಲ್ಲಿ ಉಳಿಯಲು ತುಂಬಾ ಅತಿ ಅವಶ್ಯಕ. ನೀರಿಲ್ಲದಿದ್ದರೆ ಉಳಿಗಾಲ ಇಲ್ಲ.

ಬಾವಿ ಕೆರೆ ಬೋರ್ವೆಲ್ ಅಥವಾ ನದಿ ಮೊದಲಾದ ಮೂಲಗಳಿಂದ ನೀರು ಲಭ್ಯ ಇರಬೇಕು ಆದರೆ ಪ್ರವಾಹ ಬರುವಂತಹ ಜಾಗ ಕೂಡ ಆಗಿರಬಾರದು.

೨. ಜಾಗ ಆದಷ್ಟು ಸಮತಟ್ಟಾಗಿರಬೇಕು

ಮನೆ ಕಟ್ಟಿದ ಜಾಗ ಅಂಗಳ ಸುತ್ತಮುತ್ತಲಿನ ಜಾಗ ಸಮತಟ್ಟಾಗಿದ್ದರೆ ಮಾತ್ರ ಅನುಕೂಲ ಜಾಸ್ತಿ.  ಇಲ್ಲದಿದ್ದರೆ ಸಮತಟ್ಟು ಮಾಡಲು ಖರ್ಚಾಗಬಹುದು.  

೩. ಜಾಗ ಗಟ್ಟಿಯಾಗಿರಬೇಕು

ಮನೆ ಕುಸಿಯದಂತೆ ತಳಪಾಯ ಗಟ್ಟಿಯಾಗಿ ಹಿಡಿದಿಟ್ಟುಕೊಳ್ಳಲು ನೆಲ ಗಟ್ಟಿಯಾಗಿರಬೇಕು. 

೪. ಪ್ರಶಾಂತವಾಗಿರುವ ವಾತಾವರಣ ಇರುವ ಕಡೆ

ಪ್ರಶಾಂತವಾದ ವಾತಾವರಣ ಇರುವ ಗದ್ದಲ ಗೌಜಿ ಇಲ್ಲದಂತಹ ಪ್ರದೇಶ ಮನೆ ಕಟ್ಟಲು ಸೂಕ್ತ. ದುಡಿದು ಮನೆಗೆ ಬಂದು ವಿಶ್ರಾಂತಿ ಪಡೆಯಲು ಇಂತಹ ವಾತಾವರಣ ಬೇಕೆ ಬೇಕು .

೫. ಉತ್ತಮ ಅಗಲವಾದ ರಸ್ತೆ ಇರುವ ಕಡೆ


ರಸ್ತೆ ಅನ್ನುವುದು ನಮ್ಮ ರಕ್ತ ನಾಡಿಯಿದ್ದಂತೆ ಉತ್ತಮ ರಸ್ತೆ ನಮ್ಮ ಮನೆಗೆ ತಲುಪಲು ಅಲ್ಲಿಂದ ಹೋಗಿ ಬರಲು ತುಂಬಾ ಸಹಾಯಕವಾಗುತ್ತದೆ . ಮನೆ ಕಟ್ಟುವುದರಿಂದ ಹಿಡಿದು ವಾಹನಗಳ ಓಡಾಟಕ್ಕೆ ರಸ್ತೆ ಇರಲೇಬೇಕು. ಅಗಲವಾದ ರಸ್ತೆ ಮನೆ ಮುಂದೆ ಇದ್ದರೆ ಉತ್ತಮ.

೬. ಉತ್ತಮ ಸೌಲಭ್ಯ ಇರುವ ಕಡೆ


ಆಸ್ಪತ್ರೆ, ಶಾಲೆ, ಕಾಲೇಜು, ಹೋಟೆಲ್ ಹಾಗೂ   ಅಂಗಡಿಗಳು ಹತ್ತಿರದಲ್ಲಿ ಲಭ್ಯವಿರುವ ಕಡೆ  ಮನೆ ಕಟ್ಟಿದರೆ ಒಳ್ಳೆಯದು. ಅಗತ್ಯ ಸೌಲಭ್ಯಗಳ ಅವಶ್ಯಕತೆ ಇದ್ದಾಗ ಇವು ಸಹಾಯಕ. ಆಫೀಸು ಅಥವಾ ಅಂಗಡಿಗೆ ಕೆಲಸಕ್ಕೆ ಹೋಗುತ್ತಿದ್ದರೆ ಅದು ಹತ್ತಿರದಲ್ಲಿದ್ದರೆ   ಒಳ್ಳೆಯದು.

ವಿದ್ಯುತ್ (ಕರೆಂಟ್) ಸಹ ಇರಬೇಕು. ವಿದ್ಯುತ್ ಇಲ್ಲದ ಕಡೆ ಮನೆ ಕಟ್ಟಿದರೆ ಉಳಿಯುವದು ಕಷ್ಟ. ಇಂದು ಮನೆಯಲ್ಲಿನ ಹಲವು ಉಪಕರಣಗಳಿಗೆ, ಗಾಳಿಗೆ ಅಂದ್ರೆ ಫ್ಯಾನ್ / ಎಸಿ ನಡೆಸಲು, ಬೆಳಕು ಅಂದ್ರೆ ಲೈಟ್ ಗೆ, ಮೊಬೈಲ್ ಚಾರ್ಜಿಂದ ಹಿಡಿದು ಎಲ್ಲ ಕಡೆ ವಿದ್ಯುತ್ ಅತಿ ಮುಖ್ಯ. ಪದೇ ಪದೇ ವಿದ್ಯುತ್ ಹೋಗುವ ಜಾಗ ಸೂಕ್ತ ಅಲ್ಲ.

ಇಂತಹ ಜಾಗ ಸೂಕ್ತ ಅಲ್ಲ 

೧. ಸ್ಮಶಾನಕ್ಕೆ ಹತ್ತಿರ ಇರಬಾರದು


ಸಾವನ್ನು ತಪ್ಪಿಸಿಕೊಳ್ಳಲು ಯಾರಿಂದ ಸಾಧ್ಯ? ಹಾಗಂತ ದಿನ ಹೆಣ ನೋಡುವ ಗ್ರಹಚಾರ ಯಾರಿಗೆ ಬೇಕು? ಸ್ಮಶಾನದ ಪಕ್ಕ ಅಥವಾ ದಾರಿಯಲ್ಲಿ ಮನೆ ಇರದಿರುವದು ವಾಸಿ.

೨. ಮೋರಿಯ / ಚರಂಡಿಯ ಪಕ್ಕ ಇರಬಾರದು 

ಮೋರಿಯಲ್ಲಿ ಹರಿಯುವ ಗಲೀಜು ನೀರು ಉಕ್ಕಿ ಮನೆ ಕಡೆ ಬಂದರೆ ಗತಿ? ಅದೇ ರೀತಿ ಮೋರಿಯಲ್ಲಿ ಕುಳಿತು ಬರುವ ಸೊಳ್ಳೆಗಳು ಹುಳ ಹುಪ್ಪಡಿಗಳು ಸಹಾ ಒಳ್ಳೆಯದಲ್ಲ.ಅಷ್ಟೇ ಅಲ್ಲ ಮೋರಿ ಪಕ್ಕ ದುರ್ವಾಸನೆಯ ಆಗರ ಮೂಗಿ ಮುಚ್ಚಿಕೊಂಡು ಬದುಕುವಂತಹ ಪರಿಸ್ಥಿತಿ ಕೂಡ. 

೩. ಗುಡ್ಡದ ಕೆಳಗೆ ಇರಬಾರದು

ಗುಡ್ಡದ ಮೇಲಿನಿಂದ ಬೀಳುವ ಕಲ್ಲುಗಳು ಮರಗಳು ಮಳೆಗಾಲದಲ್ಲಿ ಕುಸಿಯುವ ಗುಡ್ಡಗಳು ಎಲ್ಲವೂ ಮನೆಗೆ ಅಪಾಯ.

೪. ಕೆರೆಯ ಜಾಗದಲ್ಲಿ, ತಗ್ಗು ಪ್ರದೇಶದಲ್ಲಿ

ಮಳೆಗಾಲದಲ್ಲಿ ಕೆರೆ ತುಂಬಿ ಮನೆಗೆ ನೀರು ಬಂದರೆ ತಗ್ಗು ಪ್ರದೇಶದಲ್ಲಿ ನೀರು ನಿಂತು ಮನೆಯನ್ನು ಆವರಿಸಬಹುದು. ಅಷ್ಟೇ ಅಲ್ಲ ಕೆರೆಯ ಹತ್ತಿರ ಭೂಮಿ ಕೂಡಾ ನೀರಿನ ಕಾರಣ ಮೆತ್ತಗಿದ್ದು ಗಟ್ಟಿ ಇರದು. ಆದ್ದರಿಂದ ಇಂತಹ ಜಾಗ ಆಯ್ಕೆ ಮಾಡದಿರುವುದು ಒಳಿತು.

೫. ಸಮುದ್ರ ತೀರದ ಬಳಿ 

ಸಮುದ್ರ ತೀರದ ಬಳಿ ವಾತಾವರಣದಲ್ಲಿ ಉಪ್ಪಿನಂಶ ಜಾಸ್ತಿ ಇರುತ್ತದೆ ಅವು ತುಕ್ಕು ಹಿಡಿದು ವಸ್ತುಗಳು ಹಾಳಾಗಲು ಕಾರಣವಾಗುತ್ತದೆ.  ಜೊತೆಗೆ ದಿನವಿಡಿ  ಅಲೆಗಳ ಮೊರೆತ ಕೂಡ. 

೬. ಗುಡ್ಡದ ಮೇಲೆ ಅಂಚಲ್ಲಿ

ಗುಡ್ಡದ ಮೇಲೆ ಹತ್ತುವದು ಕಷ್ಟ. ಗುಡ್ಡ ಮಣ್ಣು ಸಡಿಲ ಆದರೆ ಅಥವಾ ತಳಪಾಯ ಸರಿ ಇಲ್ಲದಿದ್ದರೆ  ಬೀಳುವ ಸಾಧ್ಯತೆ. 

೭. ಸಡಿಲ ಮಣ್ಣಿರುವ ಜಾಗದಲ್ಲಿ

ಸಡಿಲ ಮಣ್ಣಿನಲ್ಲಿ ಕಟ್ಟಡಗಳು ಕುಸಿಯುವ ಸಾಧ್ಯತೆ ಇದೆ. ಹಿಂದೆ  ಕೆರೆ ಇದ್ದ ಜಾಗ ಮೆತ್ತಗಿದ್ದು ಕಟ್ಟಡದ ತಳಪಾಯ ಕುಸಿಯುವ ಸಾಧ್ಯತೆ ಹೆಚ್ಚು . ಹಾಗೆ ಆಗದಂತೆ ತಳಪಾಯದ ವಿನ್ಯಾಸ ಮಾಡ ಬೇಕು.

೮. ನೀರಿಲ್ಲದ ಜಾಗದಲ್ಲಿ

ನೀರು ಜೀವಿಗಳಿಗೆ ಅತಿ ಮುಖ್ಯವಾದ  ವಸ್ತು. ಕುಡಿಯುವುದಕ್ಕಾಗಿ ಇರಬಹುದು ಅಥವಾ ಸ್ನಾನಕ್ಕಾಗಿರಬಹುದು ನೀರು ಬೇಕೇ ಬೇಕು. ಬಾವಿ ಬೋರ್ವೆಲ್ ಅಥವಾ ಕಾರ್ಪೊರೇಷನ್ ನೀರಿನ ಮೂಲ ಇದ್ದ ಕಡೆ ಮಾತ್ರ ಮನೆ ಕಟ್ಟಿ. ಇಲ್ಲದಿದ್ದರೆ ಬದುಕುವುದು ದುಸ್ತರವಾಗುತ್ತದೆ.

೯. ಮೈಕ್ ಹಾಕಿ ಕಾರ್ಯಕ್ರಮ ನಡೆಸುವ ಜಾಗಗಳು


ಸಾರ್ವಜನಿಕವಾಗಿ ಮೈಕ್ ಹಾಕಿ ಕಾರ್ಯಕ್ರಮ ನಡೆಸುವಂತಹ ಯಾವುದೇ ಜಾಗದ ಹತ್ತಿರ ಮನೆ ಕಟ್ಟುವುದು ಅಷ್ಟೊಂದು ಸೂಕ್ತವಲ್ಲ ಕಾರಣ ಇಷ್ಟೇ  ಇಂತಹ ಕಾರ್ಯಕ್ರಮ ನಡೆಯುವಾಗ ಮಕ್ಕಳಿಗೆ ಪರೀಕ್ಷೆ ಅಥವಾ ಇನ್ನಿತರ ಅವಶ್ಯಕತೆ ಇದ್ದಾಗ ಈ ಈ ಮೈಕ್ ಸದ್ದು ಗಲಾಟೆ ಎನಿಸಬಹುದು ಶಾಂತತೆಗೆ ಭಂಗ ತರಬಹುದು.

೧೦. ವಿಷ ಕಾರುವ ಕಾರ್ಖಾನೆ ಪಕ್ಕ

ಹೊಗೆ ಕಾರುವ ಕಾರ್ಖಾನೆ ಇರಬಹುದು ಅಥವಾ ಪಟಾಕಿ ಸಿಡಿಮದ್ದು ಮೊದಲಾದ ಹಾನಿಕಾರಕ ವಸ್ತುಗಳ ನಿರ್ಮಾಣ ಕಂಪನಿ ಸಹ ಇರಬಹುದು. ಪೆಟ್ರೋಲ್ ಬಂಕ್ ಇರಬಹುದು ಹಾನಿಕಾರಕ ವಸ್ತುಗಳನ್ನು ಭಾರಿ ಪ್ರಮಾಣದಲ್ಲಿ ಸಂಗ್ರಹಿಸುವ  ಗೋಡೌನ ಇರಬಹುದು ಇವುಗಳ ಪಕ್ಕ ಮನೆ ಕಟ್ಟುವುದು  ಸುರಕ್ಷತೆ ದೃಷ್ಟಿಯಿಂದ ಒಳ್ಳೆಯದಲ್ಲ .

೧೧. ಕಾಡಿನ ಮಧ್ಯೆ ಅಥವಾ ಅಂಚಿನಲ್ಲಿ

ದುರ್ಗಮ ಅರಣ್ಯದಲ್ಲಿ ಅಥವಾ ಕಾಡಿನ ಅಂಚಿನಲ್ಲಿ ಮನೆ ಕಟ್ಟುವುದು ಒಳ್ಳೆಯದಲ್ಲ ಯಾಕೆಂದರೆ ಕಾಡು ಪ್ರಾಣಿಗಳ ಆಕ್ರಮಣ ಹಾಗೂ ದುಷ್ಟ ಜಂತುಗಳಿಂದ ಅಪಾಯ ಯಾವಾಗಲೂ ಇದ್ದೇ ಇದೆ . ಸಾಧ್ಯವಾದಷ್ಟು ಕಾಡಿನಿಂದ ದೂರದಲ್ಲಿ ನಗರದಲ್ಲಿಯೂ ಅಥವಾ ಚಿಕ್ಕ ಪಟ್ಟಣದಲ್ಲಿ ಮನೆ ಕಟ್ಟುವುದು ಒಳಿತು .

೧೨. ನದಿಯ ತೀರದಲ್ಲಿ 

ನದಿಯ ತೀರ ಕೂಡ ಮನೆ ಕಟ್ಟಲು ಸೂಕ್ತ ಜಾಗವಲ್ಲ ಯಾಕೆಂದರೆ ಮಳೆಗಾಲದಲ್ಲಿ ಪ್ರವಾಹ ಬಂದು ಮನೆಗೆ ಅಪಾಯ ಅಥವಾ ಮನೆಯ ಒಳಗೆ ನೀರು ನುಗ್ಗುವ ಸಾಧ್ಯತೆ ಇದೆ.

೧೩. ಮರುಭೂಮಿಯಲ್ಲಿ

ಮರುಭೂಮಿ ಅಥವಾ ಹವಾಮಾನ ತಾಪ ತುಂಬಾ ಅತಿ ಇರುವಲ್ಲಿಯೂ ಕೂಡ ಮನೆ ಕಟ್ಟುವುದು ಸೂಕ್ತವಲ್ಲ . ನೀರಿನ ಕೊರತೆ ಮತ್ತು ತಡೆಯಲಾರದಷ್ಟು ಸೆಕೆ ಕೂಡಾ ಅಲ್ಲಿ ಉಳಿಯುವುದು  ಕಷ್ಟವಾಗುತ್ತದೆ .

೧೪. ವಿಷಮ ವಾತಾವರಣ ಇರುವ ಜಾಗ

ಅತಿಯಾದ ಮಳೆ ಅತಿಯಾದ ಸೆಕೆ ಹಾಗೂ ಅತಿಯಾದ ಚಳಿ ಇರುವಂತಹ ಜಾಗವೂ ಕೂಡ ಮನೆ ಕಟ್ಟಲು ಸೂಕ್ತವಲ್ಲ ಆದರೆ ಕೆಲವೊಮ್ಮೆ ಅನಿವಾರ್ಯವಾದರೆ ಬೇರೆ ಗತಿ ಇಲ್ಲ ಆದರೂ ಸಾಧ್ಯವಿದ್ದಷ್ಟೂ ಉತ್ತಮ ವಾತಾವರಣ ಜಾಗ ಆರಿಸಿಕೊಳ್ಳುವುದು ಒಳ್ಳೆಯದು .

೧೫. ಕಸ ಹಾಕುವ ಜಾಗ


ಸಾಮಾನ್ಯವಾಗಿ ಶಹರಗಳಲ್ಲಿ ಊರಿನಲ್ಲಿ ಉಂಟಾದ ಎಲ್ಲ ಕಸವನ್ನು ಸಂಗ್ರಹಿಸಿ ಊರ ಹೊರಗೆ ಒಂದು ಜಾಗದಲ್ಲಿ ಹಾಕಿ ಅದನ್ನು ಸಂಸ್ಕರಿಸುತ್ತಾರೆ ಅಥವಾ ಸುಟ್ಟು ಹಾಕುತ್ತಾರೆ ಅಂತಹ ಜಾಗವನ್ನು ಮನೆಕಟ್ಟಲು ಆಯ್ದು ಕೊಳ್ಳದಿರುವುದು ಒಳ್ಳೆಯದು.

ಕೊನೆಯ ಮಾತು

ಅನೇಕ ಬಾರಿ ಎಲ್ಲವು ಸರಿ  ಇರುವ ಕೊರತೆ ಇರದ ಜಾಗ ಸಿಗುವದು ಕಷ್ಟ. ಆಗ ಹೊಂದಾಣಿಕೆ ಅನಿವಾರ್ಯ.

ಮೊದಲ ಪ್ರಕಟಣೆ: ಎಪ್ರಿಲ್ ೮, ೨೦೧೮, ವಿಸ್ಮಯ ಪತ್ರಿಕಾದಲ್ಲಿ

ಬರೆದವರು: ರಾಜೇಶ ಹೆಗಡೆ

ಚಿತ್ರಕೃಪೆ todd kent on Unsplash

ಚಿತ್ರಕೃಪೆ Karsten Würth on Unsplash

ಚಿತ್ರಕೃಪೆ Martha Dominguez de Gouveia on Unsplash

ಚಿತ್ರಕೃಪೆ Einar Storsul on Unsplash

ಚಿತ್ರಕೃಪೆ Miguel A Amutio on Unsplash

ಚಿತ್ರಕೃಪೆ Kouji Tsuru on Unsplash

ಚಿತ್ರಕೃಪೆ Juli Kosolapova on Unsplash

ಚಿತ್ರಕೃಪೆ Evan Demicoli on Unsplash

ತಪ್ಪದೇ ಓದಿ...

ವಿದೇಶ,ಬೆಂಗಳೂರು
©ಎಲ್ಲಾ ಹಕ್ಕುಗಳನ್ನು ಕಾದಿರಿಸಲಾಗಿದೆ. ಅನುಮತಿ ಇಲ್ಲದೇ ಲೇಖನಗಳನ್ನು ನಕಲು ಮಾಡುವಂತಿಲ್ಲ.
ಇದು ಮಸ್ತಕಮಣಿ.ಕಾಂ ಕೊಡುಗೆ